ಶುಕ್ರವಾರ, ಏಪ್ರಿಲ್ 30, 2010

ಹಸಿರು ನೆಲದಲ್ಲಿ ಮಾಸಿದ `ಕೆಂಪು' ರಾಜ್ಯದಲ್ಲಿಯೇ ಅತಿಹೆಚ್ಚು ಎನ್‌ಕೌಂಟರ್‌ಗಳು ನಡೆದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಕ್ಸಲರ ಸದ್ದು ಕೇಳುತ್ತಿಲ್ಲ. ಕಳೆದ ಡಿಸೆಂಬರ್ 22ರ ನಂತರ ಜಿಲ್ಲೆಯ ಯಾವ ಮೂಲೆಯಲ್ಲೂ ನಕ್ಸಲ್ ಚಟುವಟಿಕೆಯೂ ಕಂಡು ಬಂದಿಲ್ಲ. ಈಚೆಗೆ (ಏ.19ರಂದು) ಚಿಕ್ಕಮಗಳೂರಿನಲ್ಲಿ ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್ ಮತ್ತು ಪತ್ರಕರ್ತರ ನಡುವೆ ನಡೆದ ಸಂವಾದದಲ್ಲಿ ಇದಕ್ಕೆ ಉತ್ತರ ಸಿಕ್ಕಿತು. ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಹಿಂಸೆಯ ಮೂಲಕ ಗುರಿ ಸಾಧಿಸುವ ನಕ್ಸಲ್ ವಾದ ಬೇಕಿಲ್ಲ. ಅವರಿಗೆ ಬೇಕಾಗಿರುವುದು ಶಾಂತಿ, ಅಭಿವೃದ್ಧಿ ಹಾಗೂ ತಮ್ಮ ಕಷ್ಟಸುಖಕ್ಕೆ ಸ್ಪಂದಿಸುವ ಸರ್ಕಾರ. ಪೊಲೀಸ್ ಇಲಾಖೆಯೂ ಸೇರಿದಂತೆ ಸರ್ಕಾರಿ ಯಂತ್ರ ಇಂದು ತನ್ನ ದೃಷ್ಟಿಕೋನ ಬದಲಿಸಿಕೊಳ್ಳುವ ಪ್ರಯತ್ನ ಮಾಡಿದೆ. ಅದಕ್ಕೇ ನಕ್ಸಲ್ ಚಟುವಟಿಕೆ ಕಡಿಮೆಯಾಗಿದೆ ಎಂಬ ಮಾಧ್ಯಮದವರ ಅಭಿಪ್ರಾಯವನ್ನು ಹೊಸೂರ್ ಸಮರ್ಥಿಸಿದರು. "ಇಲ್ಲಿ ನಕ್ಸಲ್ ಚಟುವಟಿಕೆ ಕಡಿಮೆಯಾಗಲು ಪೊಲೀಸರೊಬ್ಬರೇ ಕಾರಣ ಎಂಬ ಭ್ರಮೆ ನನಗಿಲ್ಲ. ಪೊಲೀಸರು ನಕ್ಸಲರನ್ನು ನಿಗ್ರಹಿಸಬಹುದು ಆದರೆ ಅವರ ಪ್ರಭಾವವನ್ನಲ್ಲ. ಮುಖ್ಯವಾಗಿ ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಂಘಟಿತ ಪ್ರಯತ್ನ ನಕ್ಸಲ್ ಚಟುವಟಿಕೆ ನಿಯಂತ್ರಿಸುವಲ್ಲಿ ಮಹತ್ತರ ಪಾತ್ರವಹಿಸಿವೆ"- ಇದು ಹೊಸೂರ್ ನುಡಿ. ಮೊದಲೆಲ್ಲಾ ಪೊಲೀಸರು ಕಾಡು ಸುತ್ತಿ ಬರುವುದನ್ನೇ ಕೂಂಬಿಂಗ್ ಎಂದು ಕರೆಯಲಾಗುತ್ತಿತ್ತು. ಎದುರು ಸಿಕ್ಕ ಜನರನ್ನು ಪ್ರಶ್ನಿಸುತ್ತಿದ್ದ ಪೊಲೀಸರು ‘ರಿಸಲ್ಟ್’ ತೋರಿಸಲು ಅಮಾಯಕರ ಮೇಲೆ ದೌರ್ಜನ್ಯ ನಡೆಸಿ ವೀರರ ಪೋಸ್ ಕೊಡುತ್ತಿದ್ದುದು ಸುಳ್ಳಲ್ಲ. ಕೂಂಬಿಂಗ್ ಎಂಬ ವ್ಯರ್ಥ ಕಸರತ್ತಿಗೆ ನವೆಂಬರ್ 9, 1999ರಲ್ಲಿ ನಾಲ್ಕೂ ಜಿಲ್ಲೆಗಳ ಪೊಲೀಸರು (ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ) ನಡೆಸಿದ ಸಂಘಟಿತ ಯತ್ನದ ಕಾರ್ಯಾಚರಣೆ ಹೊಸ ತಿರುವು ನೀಡಿತು. ಅದೇ ವರ್ಷ ಡಿಸೆಂಬರ್ 7ರಂದು ಎರಡನೇ ಬಾರಿ ನಡೆದ ನಿಗ್ರಹ ಕಾರ್ಯಾಚರಣೆಯಲ್ಲಿ ಜಿಪಿಎಸ್ ಉಪಕರಣಗಳೂ ಸೇರಿದಂತೆ ಆಧುನಿಕ ತಂತ್ರಜ್ಞಾನದ ನೆರವು ಪೊಲೀಸರಿಗೆ ದೊರೆಯಿತು. ಮಲೆನಾಡಿನ ಪ್ರತಿ ಮನೆಗೂ ಭೇಟಿ ನೀಡಿದ ಪೊಲೀಸರು ಮೊದಲ ಬಾರಿಗೆ ಸ್ನೇಹದ ಹಸ್ತ ಚಾಚಿ ಗ್ರಾಮಸ್ಥರ ಕಷ್ಟಸುಖ ವಿಚಾರಿಸಿದ್ದರು. ಮೂರು ದಿನ ಕಾಡಿನಲ್ಲೇ ಉಳಿದು ಸೊಳ್ಳೆಗಳಿಗೆ ರಕ್ತದಾನ ಮಾಡಿ ಗಿರಿಜನರ ಬದುಕು ಅರಿತರು. ಇಷ್ಟು ದಿನ ಪೊಲೀಸರ ಗೌಪ್ಯ ದಾಖಲೆಗಳಲ್ಲಿ ನಕ್ಸಲ್ ಬೆಂಬಲಿಗರು ಎಂಬ ಒಂದೇ ಹಣೆಪಟ್ಟಿ ಹೊತ್ತಿದ್ದ ಮಂದಿಯನ್ನು ‘ಅನಿವಾರ್ಯವಾಗಿ ಬೆಂಬಲಿಸಿದವರು’ ಮತ್ತು ‘ದುರುದ್ದೇಶದಿಂದ ಬೆಂಬಲಿಸಿದವರು’ ಎಂಬ ಎರಡು ವರ್ಗವಾಗಿ ವಿಂಗಡಿಸಲಾಯಿತು. ಅನಿವಾರ್ಯವಾಗಿ ಬೆಂಬಲಿಸಿದವರನ್ನು ಠಾಣೆಗೆ ಕರೆದು ಬುದ್ಧಿ ಹೇಳಿ ಕಳುಹಿಸಿಕೊಟ್ಟ ನಂತರ ನಕ್ಸಲ್ ಬೇರಿಗೆ ಗೊಬ್ಬರವಾಗಿದ್ದ ಬೆಂಬಲಿಗರ ಮೇಲೆ ಮುಗಿಬಿದ್ದು ಬಂಧಿಸಿ ವಿಚಾರಿಸಿಕೊಂಡರು. ಪೊಲೀಸರು ‘ಬಂಧಿಸುವುದು’ ಕಡಿಮೆಯಾಗಿ ‘ವಶಕ್ಕೆ ಪಡೆಯುವುದು’ ಹೆಚ್ಚಾದ ನಂತರ ಸಾರ್ವಜನಿಕವಾಗಿ ನಕ್ಸಲರ ಬಗ್ಗೆ ಮಾತನಾಡುವುದೂ ಅಪಾಯ ಎಂಬ ಪರಿಸ್ಥಿತಿ ಮಲೆನಾಡಿನಲ್ಲಿ ನಿರ್ಮಾಣವಾಯಿತು. ಪಶ್ಚಿಮ ವಲಯ ಐಜಿಪಿಯಾಗಿ ಗೋಪಾಲ್ ಹೊಸೂರ್ ಅಧಿಕಾರಕ್ಕೆ ಬಂದ ಮೇಲೆ ಶೃಂಗೇರಿ ತಾಲ್ಲೂಕಿನ ನಕ್ಸಲ್ ಪ್ರಭಾವಿತ ಪ್ರದೇಶದಲ್ಲಿ ಪೊಲೀಸರು ಗ್ರಾಮಸಭೆ ನಡೆಸಲು ಪ್ರಾರಂಭಿಸಿದರು. ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ‘ಕೆಲಸ ಮಾಡದಿದ್ದರೆ ಉಳಿಗಾಲವಿಲ್ಲ’ ಎಂಬಂಥ ಪರಿಸ್ಥಿತಿಯನ್ನು ಪೊಲೀಸರು ನಿರ್ಮಿಸಿದರು. ಸಮಾಜದ ಮುಖ್ಯವಾಹಿನಿಯಿಂದ ದೂರ ಸರಿದಿದ್ದ, ಕುದುರೆಮುಖ ಉದ್ಯಾನವನದ ಭೂತದಲ್ಲಿ ಬೆಂದು ಹೋಗಿದ್ದ ಗಿರಿಜನರಿಗೆ ನಿಧಾನವಾಗಿ ಸರ್ಕಾರದ ಮೇಲೆ ಭರವಸೆ ಮೂಡಿತು. ಅದರ ಪರಿಣಾಮ; ನಕ್ಸಲ್ ಪ್ರಭಾವ ಜಿಲ್ಲೆಯಲ್ಲಿ ಗಣನೀಯವಾಗಿ ಕಡಿಮೆಯಾಯಿತು. ಬದುಕು ಮುಖ್ಯ ಸ್ವಾಮಿ.. ‘ನಕ್ಸಲರು ಬಂದ ಮೇಲೆಯೇ ಈ ಸರ್ಕಾರಕ್ಕೆ ನಾವೂ ಇದ್ದೇವೆ ಎಂದು ತಿಳಿದದ್ದು’ ಎನ್ನುವ ಮಾತು ಕೊಪ್ಪ ತಾಲ್ಲೂಕು ಮೇಗುಂದ ಹೋಬಳಿಯ ಮೆಣಸಿನಹಾಡ್ಯದ ಗಿರಿಜನ ಹಾಡಿಗಳಲ್ಲಿ ಇಂದಿಗೂ ಕೇಳಿ ಬರುತ್ತದೆ. ಈ ಮಾತು ಸುಳ್ಳು ಎನ್ನುವ ಧೈರ್ಯ ಯಾವ ಸರ್ಕಾರಿ ಅಧಿಕಾರಿಗೂ ಇಲ್ಲ. ಇಲ್ಲಿನ ಗಿರಿಜನರನ್ನು ಮನುಷ್ಯರೆಂದೇ ಪರಿಗಣಿಸದ ಸರ್ಕಾರ ಅವರ ಯಾವ ಕಷ್ಟಸುಖಗಳಿಗೂ ಸ್ಪಂದಿಸುತ್ತಿರಲಿಲ್ಲ. ಕೇವಲ ಕಂದಾಯ ದಾಖಲೆಗಳಲ್ಲಿ ಮಾತ್ರ ಇದ್ದ ಇಲ್ಲಿನ ಗ್ರಾಮಗಳಿಗೆ ಸರ್ಕಾರದ ಅಧಿಕಾರಿಗಳು ಬರುತ್ತಲೂ ಇರಲಿಲ್ಲ. ಆ ಗ್ರಾಮಗಳ ಅಭಿವೃದ್ಧಿಗೆ ಕಾಗದಗಳಲ್ಲಿಯೇ ಹಣ ಬಿಡುಗಡೆಯಾಗುತ್ತಿತ್ತು. ಕಾಗದಗಳಲ್ಲಿಯೇ ಕಾಮಗಾರಿಯೂ ನಡೆಯುತ್ತಿತ್ತು. ಜನ ಮಾತ್ರ ‘ತಲೆಹೊರೆ’ ಹೊತ್ತು ನರಳುತ್ತಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ನಂತರ ಅಲ್ಲಿಂದ ಗಿರಿಜನರನ್ನು ಒಕ್ಕಲೆಬ್ಬಿಸುತ್ತಾರೆ ಎಂಬ ಕೂಗು ಕೇಳಿ ಬಂದಾಗ ಇಲ್ಲಿನ ಗಿರಿಜನರು ಇಂದು ಸಂಸದರಾಗಿರುವ ಮಲೆನಾಡಿನ ಪ್ರಭಾವಿ ರಾಜಕಾರಣಿಯೊಬ್ಬರ ಮುಂದೆ ತಮ್ಮ ‘ಬದುಕುವ ಹಕ್ಕು’ ಉಳಿಸಿಕೊಡುವಂತೆ ಗೋಗರೆದರು. ‘ನಾನೇನೂ ಮಾಡ್ಲೀಕೆ ಆಗಲ್ಲ. ಸರ್ಕಾರವೇ ಬೇರೆ. ಅರಣ್ಯ ಇಲಾಖೆಯೇ ಬೇರೆ. ಸುಮ್ನೆ ಇಲ್ಲಿಂದ ಎದ್ದು ಹೋಗಿ...’ ಎಂದು ಆ ರಾಜಕಾರಣಿ ಗಿರಿಜನರನ್ನು ಗದರಿಸಿ ಕಳಿಸಿದ್ದರು. ಆದರೆ ಅದೇ ಸರ್ಕಾರ ನಕ್ಸಲರ ಪ್ರವೇಶದ ನಂತರ ಗಿರಿಜನರ ಹಾಡಿಗಳಲ್ಲಿ ‘ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ’ ಎಂದು ಫಲಕ ಹಾಕಿ ಸಾರಿ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ‘ಈ ಸರ್ಕಾರದವ್ರ ಹತ್ತು ವರ್ಷ ಮುಂಚೆ ಇಷ್ಟು ಕೆಲಸ ಮಾಡಿದ್ರೆ ಇಲ್ಲಿಗೆ ನಕ್ಸಲರೂ ಬರ್ತಿರ್ಲಿಲ್ಲ. ಎನ್‌ಕೌಂಟರ್‌ಗಳೂ ಆಗ್ತಿರ್ಲಿಲ್ಲ’ ಎಂಬ ಗಿರಿಜನರ ಚುಚ್ಚುಮಾತಿನ ಅರ್ಥ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಈಗ ಆಗುತ್ತಿದೆ. ಶೃಂಗೇರಿ ತಾಲ್ಲೂಕಿನ ಸುಂಕದಮಕ್ಕಿ, ಮೇಲ್ಘಟ್ಟ, ಹಂಚಿನಕೊಡಿಗೆಯಂಥ ಗ್ರಾಮಗಳಿಗೆ ಈಗ ಗ್ರಾವಿಟಿ ಪೈಪ್‌ಗಳಲ್ಲಿ ನೀರು ಬಂದಿದೆ. ಗಿರಿಜನರನ್ನು ಮನುಷ್ಯರು ಎಂದು ಪರಿಗಣಿಸಲೂ ಹಿಂದೇಟು ಹಾಕುತ್ತಿದ್ದ ಮೆಸ್ಕಾಂ, ಇಂದು ವಿದ್ಯುತ್ ಕೊಡಲು ಮುಂದಾಗಿದೆ. ಗುಡ್ಡ ಬಳಸಿ ಬಂದರೂ ಸಿಗದ ನ್ಯಾಯಬೆಲೆ ಅಂಗಡಿಗಳು ಹಾಡಿಗೆ ಸಾಧ್ಯವಾದಷ್ಟೂ ಸಮೀಪ ಬಂದಿವೆ. ತುಂಗಾ-ಭದ್ರಾ ನದಿಗಳಿಗೆ ತೂಗು ಸೇತುವೆಗಳಾಗಿವೆ. ಅರಣ್ಯ ಹಕ್ಕು ಕಾಯ್ದೆಯನ್ವಯ ಶೃಂಗೇರಿ ತಾಲ್ಲೂಕಿನಲ್ಲಿ 45 ಕುಟುಂಬಗಳಿಗೆ ಹಕ್ಕು ಪತ್ರ ಸಿಕ್ಕಿದೆ. ಹಕ್ಕುಪತ್ರದಲ್ಲಿ ಉಲ್ಲೇಖಿಸಲಾದ ‘ಅರಣ್ಯಕ್ಕೆ ಹಾಗೂ ವನ್ಯಜೀವಿಗಳಿಗೆ ತೊಂದರೆ ಮಾಡಬಾರದು’ ಎಂಬ ಷರತ್ತನ್ನು ಗಿರಿಜನರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ರಾಮೇಗೌಡ್ಲು ಹತ್ಯೆಯಾದ ಮೆಣಸಿನಹಾಡ್ಯದಲ್ಲಿ ಹೊಸ ಗಿರಿಜನ ವಸತಿ ಶಾಲೆ ಸ್ಥಾಪನೆಯಾಗಿದೆ. ನೆತ್ತರಿನ ನೆನಪು ಮರೆತು ಭವಿಷ್ಯದ ಅಕ್ಷರಗಳನ್ನು ಪುಟಾಣಿ ಮಕ್ಕಳು ಇಲ್ಲಿ ಉತ್ಸಾಹದಿಂದ ತಿದ್ದುತ್ತಿದ್ದಾರೆ. ಕೃಷಿ ಕಾರ್ಮಿಕರ ಕೂಲಿ 100 ರೂಪಾಯಿಗೆ ಏರಿದೆ. ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲಿ ಗಿರಿಜನರಿಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಕೊಡುವ, ಅರಣ್ಯ ಹಕ್ಕು ಕಾಯ್ದೆಯನ್ವಯ ಬಾಕಿ ಇರುವ ಅರ್ಜಿಗಳ ವಿಲೇವಾರಿ ಮಾಡುವ, ಶಾಲೆಗಳಿಗೆ ಕಂಪ್ಯೂಟರ್ ಒದಗಿಸುವ ಯೋಜನೆಗಳನ್ನು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ರೂಪಿಸುತ್ತಿವೆ. ಇಲ್ಲಿನ ಗಿರಿಜನರೇ ಹೇಳುವಂತೆ ‘ನಕ್ಸಲರು ಇಲ್ಲಿಗೆ ಯಾವ ಕಾರಣಕ್ಕೆ ಬಂದರೋ ಆ ಯಾವ ಸಮಸ್ಯೆಗಳೂ ಈಗ ಇಲ್ಲ. ನಕ್ಸಲ್ ಪ್ಯಾಕೇಜ್ ಹಣದ ದುರ್ಬಳಕೆ, ಸ್ಥಳೀಯ ರಾಜಕಾರಣಿಗಳ ಭ್ರಷ್ಟಾಚಾರ ಇತ್ಯಾದಿ ವಿಚಾರಗಳನ್ನು ಇನ್ನು ಮುಂದೆ ನಾವೇ ವಿಚಾರಿಸಿಕೊಳ್ಳುತ್ತೇವೆ. ಇನ್ನು ಇಲ್ಲಿಗೆ ನಕ್ಸಲರು ಬರುವುದು ಬೇಡ. ಅವರಿಂದ ಉಪಕಾರ ಆಗಿದೆ ಎನ್ನುವುದಕ್ಕಿಂತಲೂ ಸರ್ಕಾರ ನಮ್ಮನ್ನು ಮನುಷ್ಯರೆಂದು ಪರಿಗಣಿಸಿ ನಮಗೆ ಬೇಕಾದ ಸವಲತ್ತು ಒದಗಿಸುವ ಕೆಲಸ ಮಾಡುತ್ತಿದೆ. ನಮಗೆ ಅಷ್ಟು ಸಾಕು. ಹಿಂಸೆ ಬೇಡ- ಶಾಂತಿ ಬೇಕು’. ಸುದೀರ್ಘ ನಡಿಗೆ ಐದು ವರ್ಷಗಳ ಹಿಂದೆ (2005 ಅಕ್ಟೋಬರ್) ಚಿಕ್ಕಮಗಳೂರಿಗೆ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಬಂದಾಗ 20 ಪೇದೆಗಳ ಕಮ್ಯುನಿಟಿ ಇಂಟರ್‌ಫೇಸ್ ಎಂಬ ವಿಶೇಷ ತಂಡ ರಚಿಸಲಾಯಿತು. ಇವರು 2007ರವರೆಗೆ ಕಾರ್ಯನಿರ್ವಹಿಸಿ ಪ್ರತಿ ಹಳ್ಳಿಗಳಿಗೆ ಹೋಗಿ ಪ್ರತಿ ಮನೆಯ ಸಮಸ್ಯೆಗಳನ್ನು ಪಟ್ಟಿ ಮಾಡಿದರು. ಈ ಸಮಸ್ಯೆಗಳನ್ನು ಇಲಾಖಾವಾರು ವಿಂಗಡಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಕಚೇರಿಯಿಂದ ಪತ್ರ ಬರೆದು ಪರಿಹರಿಸಲು ವಿನಂತಿಸಲಾಯಿತು. 2005ರಿಂದ 2008ರವರೆಗೆ ಒಟ್ಟು 8 ಕೋಟಿ ರೂ. ಹಣ ಈ ಪ್ರದೇಶದ ಅಭಿವೃದ್ಧಿಗಾಗಿ ಬಿಡುಗಡೆಯಾಯಿತು. ಈ ಹಣದ ಸಂಪೂರ್ಣ ಸದ್ಬಳಕೆಯಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಣ್ಣ ಹೇಳುತ್ತಾರೆ. (ಆದರೆ ಕೆಲವು ಗ್ರಾ.ಪಂ ಅಧ್ಯಕ್ಷರು ತಮ್ಮ ಮನೆ ಉದ್ಧಾರಕ್ಕೆ ಈ ಹಣವನ್ನು ಬಳಸಿಕೊಂಡಿದ್ದು ಸುಳ್ಳಲ್ಲ. ಕಾಮಗಾರಿಗಳ ಗುಣಮಟ್ಟವೂ ಚೆನ್ನಾಗಿಲ್ಲ ಎನ್ನುವುದು ಬೇರೆಯದೇ ಮಾತು) 2008-09ಕ್ಕೆ ಪ್ಯಾಕೇಜ್‌ನ ಹೆಸರು ಬದಲಿಸಿ ‘ದೂರದ ಮತ್ತು ಒಳನಾಡು ಪ್ರದೇಶ ಅಭಿವೃದ್ಧಿ ಯೋಜನೆ’ ಎಂದು ಹೆಸರಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಶೃಂಗೇರಿ ತಹಸೀಲ್ದಾರ್ ಯೋಗೇಶ್ವರ್ ಅವರ ಜನಪರ ನಿಲುವು ಮತ್ತು ಮನೆ ಬಾಗಿಲಿಗೆ ಆಡಳಿತ ಒದಗಿಸುವ ಅವರ ಕಾಳಜಿ ನಕ್ಸಲ್ ಚಳವಳಿಯ ಕಾವು ಅದರ ಕೇಂದ್ರದಲ್ಲಿಯೇ ಕಡಿಮೆಯಾಗುವಂತೆ ಮಾಡಿತು. ಈ ಮಾತನ್ನು ಸ್ವತಃ ಐಜಿಪಿ ಗೋಪಾಲ್ ಹೊಸೂರ್ ಒಪ್ಪಿಕೊಳ್ಳುತ್ತಾರೆ. ‘ಯೋಗೇಶ್ವರ್ ಅವರಂಥ ನಾಲ್ಕು ಮಂದಿ ಲ್ವರು ತಹಸೀಲ್ದಾರ್‌ಗಳು ಸಿಕ್ಕರೆ ನಕ್ಸಲ್ ಪ್ರಭಾವ ಹಿಮ್ಮೆಟ್ಟಿಸುವುದು ಕಷ್ಟದ ಮಾತಲ್ಲ. ಪೊಲೀಸರ ಕೈಲಿ ಎಂದಿಗೂ ಮಾಡಲಾಗದ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ’ ಎನ್ನುವುದು ಹೊಸೂರ್ ಅವರ ಮಾತು. ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರ ಸಂಘಟಿತ ಪ್ರಯತ್ನದಿಂದ ನಕ್ಸಲ್ ಪ್ರಭಾವ ನಿಗ್ರಹಿಸುವ ‘ಮಾದರಿ’ ಸಾಧನೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉದಾಹರಣೆ ಇದೆ. ಇದು ಇಡೀ ದೇಶಕ್ಕೇ ಹೊಸ ಪಾಠ ಕಲಿಸಬಲ್ಲದು. (ಪ್ರಜಾವಾಣಿ, ಸಾಪ್ತಾಹಿಕ ಪುರವಣಿ, ೨೫/೪/೨೦೧೦)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ